ಮೆಣಸು, ಶುಂಠಿ, ಏಲಕ್ಕಿ ಮುಂತಾದ ಸಂಬಾರ ದಿನಸಿಗಳಿಗೆ ಭಾರತವೇ ತೌರು. ಈ ಪದಾರ್ಥಗಳ ಸಾವಿರಾರು ಟನ್ನುಗಳನ್ನು ಹೊರದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇವನ್ನು ಸಂಸ್ಕರಿಸುವ ವಿಧಾನಗಳು ಅಷ್ಟು ಸಮರ್ಪಕವಾಗಿಲ್ಲ. ಗಾತ್ರ, ಬಣ್ಣ, ವಾಸನೆ, ರುಚಿ ಮುಂತಾದ ಗುಣಗಳಲ್ಲಿ ಅತ್ಯುತ್ತಮ ಪದಾರ್ಥ ಪಡೆಯಲು ಕೈಗೊಳ್ಳಬೇಕಾದ ಕ್ರಮಗಳ ವಿಚಾರ ಸಂಶೋಧನೆಗಳು ನಡೆದು ಕೈಗಾರಿಕೆಯವರಿಗೆ ಅನೇಕ ಉಪಯುಕ್ತ ಸಲಹೆಗಳನ್ನು ಕೊಡಲಾಗಿದೆ. ಉದಾಹರಣೆಗೆ ಏಲಕ್ಕಿಯ ಸಿಪ್ಪೆ ಹಸಿರಾಗಿದ್ದಷ್ಟೂ ಅರಬ್ಬೀ ದೇಶಗಳಲ್ಲಿ ಅದಕ್ಕೆ ಹೆಚ್ಚು ಬೆಲೆ ಬರುತ್ತದೆ. ಈ ಹಸಿರು ಬಣ್ಣವನ್ನು ಹೇಗೆ ಹೆಚ್ಚಿಸಬಹುದು, ದೀರ್ಘಕಾಲ ಕಾಪಾಡಬಹುದು ಎನ್ನುವುದನ್ನು ಸಂಶೋಧನಾಲಯದವರು ಕಂಡುಹಿಡಿದು ಏಲಕ್ಕಿ ಬೆಳೆಯುವವರಿಗೆ ತಿಳಿಸಿಕೊಟ್ಟಿದ್ದಾರೆ. ಹೊರದೇಶಗಳಲ್ಲಿ ಸಂಬಾರದಿನಸಿಗಳಿಂದ ತೈಲ, ಸಾರಪದಾರ್ಥಗಳನ್ನು ತಯಾರಿಸಿ ಹೆಚ್ಚು ಬೆಲೆಗೆ ಮಾರುತ್ತಿದ್ದಾರೆ. ಇವನ್ನು ಆಹಾರಗಳಲ್ಲಿ ಉಪಯೋಗಿಸುವುದು ಸುಲಭ ಮತ್ತು ಲಾಭದಾಯಕ. ಭಾರತದಲ್ಲೂ ಇವುಗಳ ತಯಾರಿಕೆ ನಡೆದು ರಫ್ತಾಗಬೇಕು. ಆಗ ನಮ್ಮ ವಿದೇಶಿ ವಿನಿಮಯದ ಗಳಿಕೆ ಹೆಚ್ಚಾಗುತ್ತದೆ. ಆದರೆ ಇದಕ್ಕೆ ಬೇಕಾದ ತಂತ್ರಜ್ಞಾನ ನಮ್ಮಲ್ಲಿಲ್ಲ. ಇದನ್ನು ಸಂಶೋಧನಾಲಯ ಕಂಡುಕೊಂಡು ಕೈಗಾರಿಕೆಯವರಿಗೆ ಒದಗಿಸುತ್ತದೆ. 
ಆಹಾರಗಳ ರುಚಿ ಮತ್ತು ವಾಸನೆ ಬಹಳ ಮುಖ್ಯವಾದುವು. ಇವುಗಳ ಸ್ವರೂಪವನ್ನು ವೈಜ್ಞಾನಿಕವಾಗಿ ಕಂಡುಕೊಂಡು, ವಿವಿಧ ಆಹಾರಗಳ ನಿಜವಾಸನೆ (ಫ್ಲೇವರ್ಸ್) ಹೇಗೆ ಉತ್ತಮಪಡಿಸಬಹುದು ಎನ್ನುವ ದಿಶೆಯಲ್ಲಿ ಸಂಶೋಧನೆಗಳು ಇಲ್ಲಿ ನಡೆಯುತ್ತಿವೆ. ಕಾಫಿ, ಟೀ, ದ್ರಾಕ್ಷಾರಸ, ಮಿಠಾಯಿಗಳು, ಹಾಲಿನ ಉತ್ಪನ್ನಗಳು ಮುಂತಾದ ಆಹಾರಗಳನ್ನು ಕುರಿತ ಅನೇಕ ಉಪಯುಕ್ತ ವಿಷಯಗಳು ತಿಳಿದುಬಂದಿವೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ